ಶ್ರೀಧರಾಚಾರ್ಯ
	ಸು 1049. ಜೈನಕವಿ. ಜಾತಕತಿಲಕಂ ಎಂಬ ಗ್ರಂಥದ ಕರ್ತೃ. ಬೆಳುವಲ ನಾಡಿನ ನರಗುಂದ ಈತನ ಜನ್ಮಸ್ಥಳ. ಜಾತಕತಿಲಕಂ ಗ್ರಂಥದ ಕೊನೆಯಲ್ಲಿ ಧಾತ್ರಿನಾವಮಲ್ಲ ಭೂಮಿಪಾಲಕ ನೊಸೆದಾಳ್ಗೆ ಎಂದು ತಿಳಿಸಿರುವುದರಿಂದಲೂ ಅದರಲ್ಲೇ ಹೇಳಿರುವ ಗ್ರಂಥ ರಚನೆ ಮುಗಿದ ದಿನ 1049 ನವೆಂಬರ್ 16ನೆಯ ತಾರೀಖಿಗೆ ಸರಿಹೊಂದುವುದರಿಂದಲೂ ಇವನು ಚಾಳುಕ್ಯ ಒಂದನೆಯ ಸೋಮೇಶ್ವರನ (1044-68) ಆಸ್ಥಾನ ಕವಿ ಆಗಿದ್ದಿರಬಹುದೆಂದು ತೋರುತ್ತದೆ. ಈತ ತನ್ನನ್ನು ಪ್ರಜ್ಞಾಧರ, ಶಾಸ್ತ್ರಕವಿತಾಬಾಂಧವ, ಕರಣರತ್ನ, ಬುಧತಿಲಕ, ಬುಧಮಿತ್ರ, ಸಮ್ಯಕ್ತ್ವರತ್ನಾಕರ, ಕವಿರಾಜಬಾಂಧವ, ಪದ್ಯವಿದ್ಯಾಧರ, ಸುಜನೈಕಬಾಂಧವ, ಗದ್ಯಪದ್ಯವಿದ್ಯಾಧರ ಮುಂತಾಗಿ ವಿಶೇಷಿಸಿಕೊಂಡಿ ದ್ದಾನೆ. ಪೂರ್ವಕವಿಗಳಲ್ಲಿ ಪಂಪ, ಚಂದ್ರಭಟ್ಟ, ಮನಸಿಜ, ಗಜಾಂಕುಶ, ಗುಣವರ್ಮ - ಇವರನ್ನು ಸ್ಮರಿಸಿದ್ದಾನೆ.

	ಜಾತಕತಿಲಕಂ ಕನ್ನಡದ ಮೊತ್ತಮೊದಲನೆಯ ಜೋತಿಷ್ಯಗ್ರಂಥ. ಇದರಲ್ಲಿ 345 ಕಂದಪದ್ಯ, 177 ಮತ್ತೇಭವಿಕ್ರೀಡಿತವೃತ್ತ, 39 ಚಂಪಕಮಾ ಲಾವೃತ್ತ, 21 ಮಹಾಸ್ರಗ್ಧರಾವೃತ್ತ, 9 ಅಕ್ಕರವೃತ್ತ, 4 ಶಾರ್ದೂಲ ವಿಕ್ರೀಡಿತ ವೃತ್ತ, 3 ಪೃಥ್ವೀವೃತ್ತ ಮತ್ತು 2 ಉತ್ಪಲಮಾಲಾವೃತ್ತಗಳು ಇವೆ. ಸಂಜ್ಞಾಪ್ರಕರಣ, ಬಲಾಬಲಪ್ರಕರಣ, ಗರ್ಭಾದಾನಪ್ರಕರಣ, ಜನ್ಮಪ್ರಕರಣ, ವಿಯೋನಿಜನ್ಮಪ್ರಕರಣ, ಅರಿಷ್ಟಯೋಗಪ್ರಕರಣ, ಅರಿಷ್ಟಭಂಗಪ್ರಕರಣ, ಆಯುರ್ದಾಯಪ್ರಕರಣ, ದಶಾಂತರ್ದಶಾಪ್ರಕರಣ, ಅಷ್ಟಕವರ್ಗಪ್ರಕರಣ, ಕರ್ಮಜೀವನಪ್ರಕರಣ, ರಾಜಯೋಗಪ್ರಕರಣ, ನಾಭಸುಯೋಗಪ್ರಕರಣ, ಚಾಂದ್ರಯೋಗಪ್ರಕರಣ, ದ್ವಿತ್ರಿಗ್ರಹಯೋಗ ಪ್ರಕರಣ, ಪ್ರವ್ರಜ್ಯಾಯೋಗಪ್ರಕರಣ, ರಾಶಿಶೀಲಪ್ರಕರಣ, ಲಗ್ನಾದಿಭಾವ ಪ್ರಕರಣ, ದ್ರೇಕ್ಕಾಣಪ್ರಕರಣ, ದೃಷ್ಟಿಪ್ರಕರಣ, ಅನಿಷ್ಟಯೋಗಪ್ರಕರಣ, ಸ್ತ್ರೀಜಾತಕಫಲಪ್ರಕರಣ, ನಿರ್ಯಾಣಪ್ರಕರಣ, ನಷ್ಟಜಾತಕಪ್ರಕರಣ ಎಂಬ 24 ಪ್ರಕರಣಗಳಿವೆ. ಒಂದೊಂದು ಪ್ರಕರಣ ವಿಷಯವೂ ಒಂದೊಂದು ಅಧಿಕಾರದಲ್ಲಿ ವರ್ಣಿತವಾಗಿದೆ. ಕವಿ, ಸಂಸ್ಕøತ ಭಾಷೆಯಲ್ಲಿರುವ ವರಾಹಮಿಹಿರಾಚಾರ್ಯನ ಬೃಹಜ್ಜಾತಕ ಮತ್ತು ಲಘುಜಾತಕ, ಕಲ್ಯಾಣವರ್ಮನ ಸಾರಾವಳಿ-ಈ ಗ್ರಂಥಗಳಿಂದ ಶ್ಲೋಕಗಳನ್ನು ಸಂಗ್ರಹಿಸಿ ಅವನ್ನು ಕನ್ನಡಕ್ಕೆ ಪದ್ಯರೂಪದಲ್ಲಿ ಭಾಷಾಂತರಿಸಿ ತನ್ನ ಈ ಕೃತಿಯನ್ನು ರಚಿಸಿದ್ದಾನೆ. ಆದರೂ ಈತ ತಾನು ಗ್ರಂಥಗಳಿಂದ ಸಂಗ್ರಹಿಸಿ ಭಾಷಾಂತರ ಮಾಡಿರುವ ಅಂಶವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಶಾಸ್ತ್ರಗ್ರಂಥ ವಾದರೂ ಕೆಲವು ಕಡೆ ಕಾವ್ಯತ್ವಕ್ಕೆ ನಿದರ್ಶನಗಳು ಸಾಕಷ್ಟು ದೊರೆಯುತ್ತವೆ. 	ಚಂದ್ರಪ್ರಭಚರಿತೆ ಈತನ ಇನ್ನೊಂದು ಕೃತಿ. ಇದು ಉಪಲಬ್ಧವಿಲ್ಲ.                
	(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ